ಮಾಂಟ್ಸರಾಟ್
ಕ್ಯಾರಿಬಿಯನ್ ಸಮುದ್ರದಲ್ಲಿರುವ ಲೀವರ್ಡ್ ದ್ವೀಪ ಸಮೂಹಗಳಿಗೆ ಸೇರಿದ ಒಂದು ದ್ವೀಪ.  ಬ್ರಿಟಿಷ್ ಅಧೀನ ಪ್ರದೇಶ.  ಇದು ವೆಸ್ಟ್ ಇಂಡೀಸ್ ಬಳಿ ಇರುವ ಆಂಟಿಗುವಾ ದ್ವೀಪದ ನೈರುತ್ಯಕ್ಕೆ 43ಕಿಮೀ ದೂರದಲ್ಲಿದೆ.  ಉತ್ತರ ಅಕ್ಷಾಂಶ 16015'.  ಪಶ್ಚಿಮ ರೇಖಾಂಶ 62012' ನಲ್ಲಿದೆ.  ಈ ದ್ವೀಪ 17.6 ಕಿಮೀ ಉದ್ದ ಮತ್ತು 11.2ಕಿಮೀ ಅಗಲವಿದ್ದು ಒಟ್ಟು ವಿಸ್ತೀರ್ಣ 102.3ಚಕಿಮೀ.  ರಾಜಧಾನಿ ಪ್ಲಿಮತ್, ಜನಸಂಖ್ಯೆ 12,074 (1980).

ಈ ದ್ವೀಪದಲ್ಲಿ ಮೂರು ಗಿರಿ ಸಮೂಹಗಳಿವೆ.  ಜೀವಂತ ಜ್ವಾಲಾಮುಖಿಯಿರುವ ಸುಫ್ರೀಯರ್ ಶಿಖರ (910ಮೀ) ಇವುಗಳಲ್ಲೆಲ್ಲ ಅತ್ಯಂತ ಎತ್ತರವಾದುದು.  ಸ್ಪೇನಿನ ಮಾಂಟ್ಸರಾಟ್ ಪರ್ವತದಲ್ಲಿ ಕಂಡುಬರುವ ಗರಗಸದ ಬಾಯಿ ರೀತಿಯ ಏಣುಳ್ಳ ಶಿಖರಗಳನ್ನು ಇಲ್ಲಿ ಕಂಡ ಕ್ರಿಸ್ಟೊಫರ್ ಕೊಲಂಬಸ್ ಈ ದ್ವೀಪಕ್ಕೂ ಆ ಪರ್ವತದ ಹೆಸರನ್ನೇ ಕೊಟ್ಟ (1493), ಈ ಶಿಖರಗಳ ತುದಿಯಲ್ಲಿ ಗಿಡ್ಡ ಕಾಡುಗಳಿವೆ.  ವಾರ್ಷಿಕ ಸರಾಸರಿ ಮಳೆ 1628 ಮಿಮೀ.  ಹತ್ತಿ ಟೊಮ್ಯಾಟೋ ಹಾಗೂ ಮತ್ತಿತರ ತರಕಾರಿಗಳನ್ನು ಬೆಳೆಯುತ್ತಾರೆ.  ಹಸು, ಹಂದಿ, ಕುರಿಗಳ ಸಾಕಣೆಯಿದೆ.  

1632ರಲ್ಲಿ ಸರ್ ಥಾಮಸ್ ಮಾರ್ಮರ್‍ನ ನೇತೃತ್ವದ ಐರಿಷ್ ನೆಲೆಸಿಗರು ಇದನ್ನು ವಸಾಹತುವಾಗಿ ಮಾಡಿಕೊಂಡರು.  1871ರಿಂದ 1956ತನಕ ಇದು ಲೇವರ್ಡ್ ದ್ವೀಪ ಸಮೂಹಗಳ ಫೆಡರಲ್ ವಸಾಹತುವಿನ ಭಾಗವಾಗಿತ್ತು.  1958ರಲ್ಲಿ ವೆಸ್ಟ್‍ಇಂಡೀಸ್ ಫೆಡರೇಷನ್‍ಗೆ ಸೇರಿತು.  1958ರಲ್ಲಿ ಅದನ್ನು ವಿಸರ್ಜಿಸಲಾಯಿತು.  ಈಗ ರಾಜಕೀಯವಾಗಿ ಗ್ರೇಟ್ ಬ್ರಿಟನ್ನಿನ ಒಂದು ಆಶ್ರಿತ ದ್ವೀಪ.  ವಾಯು ಮತ್ತು ಸಮುದ್ರ ಸಂಪರ್ಕಗಳಿವೆ.  ವೈದ್ಯಕೀಯ ಸೌಕರ್ಯವಿದೆ.  ಪ್ರವಾಸಿಗರಿಗೆ ಆಕರ್ಷಣೆಯಿದೆ.					       	  				(ಡಿ.ಎಸ್.ಜೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ